Total Pageviews

Thursday, February 24, 2011

ಮೂಕ ಹಕ್ಕಿ

ಹಾಡಲಾಗದ ಮೂಕ ಹಕ್ಕಿ ನಾ,
ಬಲಿತ ರೆಕ್ಕೆಗಳೆ ಆಸ್ತಿ ನನ್ನ ಹತ್ತಿರ
ಹಾಡಲಾಗದೆಂದು ಮರುಗಲೇಕೆ ನಾ?
ಹಾರುವಾಗ ಮುಗಿಲೆತ್ತರ.

ಎಲ್ಲರಂತೆ ತಲೆದೂಗುವೆ ನಾ
ಹಾಡೊ ಹಕ್ಕಿಯೆ ನಿನ್ನ ಕಂಠವೇ ಮಧುರ
ರೆಕ್ಕೆ ಬಡಿದು ಮತ್ತೆ ಹಾರುವೆನು ನಾ
ನನ್ನ ಬದುಕಿಗದೆ ಪ್ರಶ್ನೆ, ಅದೆ ಉತ್ತರ.

-ಹೆಸರಲ್ಲೇನಿದೆ

Wednesday, February 23, 2011

ಮಳೆ ಬರಲಿ

ರವಿ ಕಿರಣಗಳನ್ನು ಮರೆಮಾಡಿದ್ದ ಮೇಘ ಗಗನದಲ್ಲಿ ಕಪ್ಪು ಬಣ್ಣ ಚೆಲ್ಲಿ ವರುಣ ಬರುವನೆಂದು ಭೂಮಿಗೆ ಕಿರುಸಂದೇಶ ನೀಡಿದ್ದಳು. ಆಗ ತಾನೆ ಶಾಲೆ ಮುಗಿದು ನಮಗೆ ಸ್ವತಂತ್ರ ಸಿಕ್ಕಿತ್ತು. ಹಕ್ಕಿಗಳೂ ಕೂಡ ನಮ್ಮ ಹಾಗೆಯೆ ಶಾಲೆ ಮುಗಿಸಿ ಗೂಡಿನೆಡೆಗೆ ಹಿಂಡು ಹಿಂಡಾಗಿ ಹಾರುತಿದ್ದವು. ಸ್ಕೂಲ್ ಬ್ಯಾಗ್ ಹೊತ್ತು ಬಾಗಿದ ಬೆನ್ನು, ಒಂದು ಕೈಯಲ್ಲೆ ಊಟದ ಬುಟ್ಟಿ ಇನ್ನೊಂದರಲ್ಲಿ ರಸ್ತೆ ಬದಿ ಕೊಂಡ ಸೀಬೆ ಹಣ್ಣು. ಜೊತೆಯಲ್ಲಿ ಗೆಳೆಯರ ಬಳಗ. ಶಾಲೆಯಿಂದ ತುಸು ದೂರ ಬರುವಷ್ಟರಲ್ಲಿ ಮಳೆ ಶುರುವಾಯಿತು. ಆ ವರ್ಷದ ಮೊದಲ ಮಳೆ ಅದು, ಆದರಿಂದ ನಮಗಾರಿಗು ಮರೆಯಲ್ಲಿ ನಿಲ್ಲಬೇಕೆಂದೆನಿಸಲಿಲ್ಲ. ಮೊದಲ ಮಳೆಗೆ ಮೈಯೊಡ್ಡಿ ತುಸು ಹೊತ್ತು ಪ್ರಥಮ ವರ್ಷಧಾರೆಯ ಸ್ಪರ್ಷಾನಂದ ಪಡೆದೆವು.ಮಳೆಗೆ ಹೆದರದೆ ಮನೆಯೆಡೆಗೆ ನೆಡೆದೆವು. ಮನೆ ತಲುಪವಷ್ಟಲ್ಲಿ ಚಪ್ಪಲಿಗಳು ಯೂನಿಫ಼ಾರ್ಮ್ ಚಡ್ಡಿ ಮೇಲೆ ಕೆಸರಿನ ಚಿತ್ತಾರ ಬಿಡಿಸಿದ್ದವು.

ಒದ್ದೆಯಾಗಿದ್ದ ತಲೆಯನ್ನು ಟವಲ್ ವೊಂದರಲ್ಲಿ ವರೆಸುತ್ತಾ " ಮಳೆಯಲ್ಲಿ ಯಾಕ್ ನೆನೆಯಕ್ಕೋದೆ?? ಅಲ್ಲೆ ಎಲ್ಲಾದ್ರು ಮರೆಯಲ್ಲಿ ನಿಂತು ಮಳೆ ನಿಂತ ಮೇಲೆ ಬರೋದ್ ತಾನೆ? ನಾಳೆ ಜ್ವರ ಗಿರ ಬಂದ್ರೆ?" ಅಮ್ಮಾ ಕೇಳದಳು. ಜ್ವರಾ ಬಂದ್ರೆ ಎರಡು ದಿನ ಸ್ಕೂಲಿಗೆ ಚಕ್ಕರ್ ಹಾಕ ಬಹುದು ಅಂತ ಮನಸಲ್ಲೆ ಖುಷಿ ಪಡುತ್ತಾ. ನೀನೆ ಹೇಳಿದ್ದೆ ಮಳೆ ಬರುವಾಗ ಮರದ ಕೆಳಗೆ ನಿಲ್ಲಬಾರದು ಅಂತ ಸಮಜಾಯಸಿ ನೀಡಿದೆ. ಕೆಸರಿನ ಚಿತ್ತಾರ ನೋಡಿ ಅಮ್ಮ ಬೈಗುಳ ಮುಂದುವರಿಸುತ್ತಾ ಅಡುಗೆ ಮನೆ ಕಡೆ ನಡೆದಳು. ಎಡಗಿವಿಯಲ್ಲಿ ಕೇಳಿದ್ದನ್ನ ಬಲಗಿವಿಯಲ್ಲಿ ಬಿಟ್ಟು ಮಳೆಯೊಂದಿಗಿನ ಆಟದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದೆ.

ಮನೆಯ ಮುಂದೆಯೆ ಮಳೆ ನೀರಿನ ಸರೋವರ ನಿರ್ಮಾಣವಾಗಿತ್ತು. ನೋಟ್ ಬುಕ್ ಒಂದರಿಂದ ಹಾಳೆಯೊಂದನ್ನು ಹರಿದು ಪೇಪರ್ ದೋಣಿಯೊಂದನ್ನು ನಿರ್ಮಿಸಿ ಅದರ ಮೇಲೆ ಇಂಡಿಯಾ ಎಂದು ಬರೆದು ನೀರ ಮೇಲೆ ತೇಲಿಬಿಟ್ಟೆ. ಅದನೋಡಿ ನನ್ನ ತಮ್ಮ ಕೂಡ ಸ್ಪರ್ಧೆಗಿಳಿದ, ಕತ್ತಿ ದೋಣಿ, ರೆಕ್ಕೆ ದೋಣಿ ಹೀಗೆ ಹತ್ತು ಹಲ್ಲವಾರು ದೋಣಿಗಳನ್ನು ಮಾಡಿ ನೀರಿನಲ್ಲಿ ತೇಲಿ ಬಿಟ್ಟೆವು ಅಷ್ಟರಲ್ಲಿ ಅರ್ಧ ನೋಟ್ ಬುಕ್ ನೀರು ಪಾಲಗಿತ್ತು. ನಮ್ಮ ಈ ಘನ ಕಾರ್ಯ ನೋಡಿ ಅಮ್ಮ ಮಂಗಳಾರತಿ ಮಾಡಿ ಕಿವಿ ಹಿಂಡಿ ಮನೆಯೊಳಗೆ ಕರೆದೊಯ್ದಳು.

ಬಿಡದೆ ಸುರಿಯುತ್ತಿದ್ದ ಮಳೆಗೆ ಜೋರು ಗಾಳಿ ಜೊತೆಯಾಯ್ತು. ತಕ್ಷಣವೇ ಕರ್ನಾಟಕ ವಿದ್ಯುತ್ ಸರಬಾರಾಜು ಮಂಡಳಿಯವ್ರು ವಿದ್ಯುತ್ ಸರಬರಾಜು ಕಟ್ ಮಾಡಿದ್ರು. ಛತ್ರಿ ಹಿಡಿದು ನಡೆಯುತ್ತಿದ್ದ ಶಿವಣ್ಣ "ದೊಡ್ಡ ಆಲದ ಮರದ ಹತ್ತಿರ ಕಂಬ ಬಿದ್ದೊಗಿದೆ ಬೆಳಿಗ್ಗೆ ತನಕ ಕರೆಂಟ್ ಇಲ್ಲ" ಅಂದ. ಇದನ್ನು ಕೇಳಿ ನನಗು ತಮ್ಮನಿಗೂ ಎಲ್ಲಿಲ್ಲದ ಸಂತೋಷ, ನಾಳೆಗೆ ಹೋಮ್ ವರ್ಕ್ ಬರೆಯೋ ಹಾಗಿಲ್ಲ ಅಂತ. ಜೋರಾಗಿ ಸುರಿತಾ ಇದ್ದ ಮಳೆ, ಸೋರೊ ಸೂರು, ಆ ಸೂರಿನ ಕೆಳಗೆ ಪಾತ್ರೆಗಳು, ಆ ಪಾತ್ರೆಗಳಲ್ಲಿ ಸಂಗ್ರಹವಾಗಿದ್ದ ಮಳ ನೀರಲ್ಲಿ ನಮ್ಮ ದೋಣಿಗಳು.ಕತ್ತಲಾಗುವುಷ್ಟರಲ್ಲಿ ಮೇಣದ ಬತ್ತಿಗಳೆರಡು ಮನೆ ಬೆಳಗೊದರಲ್ಲಿ ನಿರತವಾದುವು. ಆ ಮೇಣದ ಬೆಳಕಿನಲ್ಲಿ ಗೋಡೆಗಳ ಮೇಲೆ ನೆರಳಿನ ಚಿತ್ತಾರ. ಅಲ್ಲೆ ಸಿಕ್ಕ ಕೆಲೆ ಕೀಟಗಳು ಬೆಂಕಿಗ ಬಲಿಯಾದವು. ಮಳೆಯ ಚಳಿಗೆ ಅಮ್ಮ ಕರಿದ ಬಿಸಿ ಬಿಸಿ ಬಜ್ಜಿ. ಹೊಮ್ ವರ್ಕ್ನ ತಲೆ ಬಿಸಿ ಕೂಡ ಇರಲಿಲ್ಲ. ಮನಸ್ಸಿಗೆ ಏನೋ ಖುಷಿ.

ದಿನಗಳು ಹಾಗೆ ಉರುಳಿದವು. ಹಳೆ ಕನ್ನಡ ಫ಼ಿಲಂ ತರಾನೆ ನಾವು ಸೈಕಲ್ ಹೋಡಿತಾನೆ ಬೇಗ ದೊಡ್ಡವರಾಗಿ ಬಿಟ್ವಿ.ಮಳೆಯಲ್ಲಿ ನೆನೆಯೊ ಸ್ವತಂತ್ರ ಕೂಡ ಹೊಯ್ತು. ಬೇರೆಯವರು ಏನಂದುಕೊಳ್ಳುತ್ತಾರೊ ಅಂತಾನೆ ನಮ್ಮ ಖುಷಿಗಳನ್ನ ಬದಿಗಿಟ್ಟು ಬದುಕುವಷ್ಟು ದೊಡ್ಡವಾರಾಗಿ ಬಿಟ್ವಿ. ಮತ್ತೆ ಆ ಸಂತಸದ ಮಳೆ ಬರುತ್ತಾ?????.....