Total Pageviews

Monday, April 16, 2012

ಕೂಗಿ ಹೇಗೆ ಹೇಳಲಿ

ಕೂಗಿ ಹೇಗೆ ಹೇಳಲಿ?
ಎಲ್ಲಾ ಒಂದೇ ಸಾಲಲಿ
ದಿನವು ನನ್ನ ನಿದ್ದೆಲಿ
ಕನಸ ಧಾರವಾಹಿಲಿ
ನನ್ನನು ಕಾಡುವ
ಚೋರಿಯು ನೀನೆಂದು

Thursday, June 9, 2011

ಸಾಧನೆ

ಬದುಕಿನಲ್ಲಿರಲಿ ಸದಾ ಹೊಸ ಸಾಧನೆಗಳ ತವಕ
ಎಡ ಬಿಡದೆ ಶ್ರಮಿಸುತಿರಿ ಗುರಿಮುಟ್ಟುವ ತನಕ
ನಿಮ್ಮೊಳಗಿದ್ದರೆ ಸಾಧಿಸಬೇಕೆಂಬ ಛಲ. ಹಂಬಲ
ಅ ಭಗವಂತನಾಗುವನ ನಿಮ್ಮ ಬಲ, ಬೆಂಬಲ

- ಅರುಣ್ ರಂಗನಾಥ್

http://www.facebook.com/profile.php?id=1085183816

Monday, March 21, 2011

ಈ ಪರೀಕ್ಷೆಗಳು ಯಾಕಾದರು ಬರುತ್ತವೊ??

ಪ್ರತಿ ವರ್ಷ ಮಾರ್ಚಿ ತಿಂಗಳು ಬಂತೆಂದರೆ ಇಡೀ ಭಾರತೀಯ ವಿದ್ಯಾರ್ಥಿ ಸಮುದಾಯವನ್ನು ಕಾಡೊ ಗುಮ್ಮ ಅಂದರೆ ಈ ಪರೀಕ್ಷೆ. ಈ ಪರೀಕ್ಷೆಗಳನ್ನ ಜಗತ್ತಿಗೆ ಪರಿಚಯಿಸಿ ಆ ಪುಣ್ಯಾತ್ಮ ಯಾರೋ?? ಆ ವ್ಯಕ್ತಿಯ ಬಗ್ಗೆ ಅದೆಷ್ಟು ಕೋಪ ಇದೆಯೆಂದರೆ ಆತನನ್ನು google ನಲ್ಲೂ ಹುಡುಕಿದೆ. ಆತ ಬದುಕುಳದಿದ್ದರೆ ಒಂದು ಕೈ ನೋಡಿಕೊಳ್ಳೋಣ ಅಂಥಾ. ಚಲನಚಿತ್ರ ನಾಯಕಿಯರನ್ನು ಹೊರತುಪಡಿಸಿ ವಿದ್ಯಾರ್ಥಿಗಳ ನಿದ್ದೆ ಕೆಡಿಸುತ್ತಿರುವ ವ್ಯಕ್ತಿ ಬಹುಶಃ ಅವನೊಬ್ಬನೆ ಅನಿಸುತ್ತದೆ.

ಆ ಮೂರ್ಖನನ್ನು ಬಿಡಿ ನಮಗೆ ಪಾಠ ಹೇಳೊ ಗುರುಗಳಿಗಾದರೂ ಬುದ್ಧಿ ಬೇಡವೇ?? ಹೇಳುವುದು ಒಂದು ಮಾಡುವುದು ಇನ್ನೊಂದು. ಪ್ರಕೃತಿಯನ್ನು ಪ್ರೀತಿಸಿ ಮಕ್ಕಳೆ ನಿಸರ್ಗ ಮಾತೆ ಮುನಿದರೆ ನಮಗೆ ಉಳಿವಿಲ್ಲ, ಒಬ್ಬೊಬ್ಬ ವಿದ್ಯಾರ್ಥಿಯು ಒಂದೊಂದು ಗಿಡ ನೆಡ ಬೇಕು. ಅರಣ್ಯಗಳನ್ನ ರಕ್ಷಿಸಬೇಕು, ಹಸಿರೇ ಉಸಿರು ಎಂದು ಬಣ್ಣ ಬಣ್ಣದ ಮಾತಾಡುವ ಗುರುಗಳು ಕೂಡ ಪರೀಕ್ಷೆಯಂತಹ ಪ್ರಕೃತಿ ವಿನಾಶಕ ಕೃತ್ಯಗಳಲ್ಲಿ ತಮ್ಮನ್ನೇಕೆ ತೊಡಗಿಸಿಕೊಳ್ಳುತ್ತಾರೋ ಆ ದೇವರಿಗೆ ಗೊತ್ತು. ಸುಮಾರು ನೂರ ಹದಿನೈದು ಕೋಟಿ ಜನರಿರುವ ನಮ್ಮ ದೇಶದಲ್ಲಿ ಕಡಿಮೆ ಅಂದರು ಮೂವತ್ತು ಕೋಟಿ ವಿದ್ಯಾರ್ಥಿಗಳಿರಲ್ವಾ?? ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಶೆ ತರತರದ ಪ್ರವೇಶ ಪರೀಕ್ಷೆ ( ಈಗೇನ್ ಬಿಡಿ lkg ukg ಗೂ CET ಗಳಿವೆ) ಹೀಗೆ ಹತ್ತು ಹಲವಾರು ಪರೀಕ್ಷೆಗಳನ್ನ ಬರಿತಾರೆ. ಒಬ್ಬ ವಿದ್ಯಾರ್ಥಿ ವರ್ಷಕ್ಕೆ ಪರೀಕ್ಷೆಗಳಿಗೆಂದೆ ಸರಾಸರಿ ಇನ್ನೂರರಿಂದ ಮುನ್ನೂರು ಪುಟಗಳನ್ನ ಬಳುಸುತ್ತಾನೆ.ಇನ್ನು ಮೂವತ್ತು ಕೋಟಿ ವಿದ್ಯಾರ್ಥಿಗಳಿಗೆ ನೀವೆ ಲೆಕ್ಕ ಹಾಕಿ. ಪಾಪ ಈ ಪರೀಕ್ಷೆಗಳಿಂದಲೆ ಎಷ್ಟೊ ಅಮಾಯಕ ಮರಗಳು ಪ್ರಾಣ ತೆತ್ತಿವೆ. ಪ್ರತಿಯೊಂದು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಲು ಉತ್ತರ ಪತ್ರಿಕೆಯ ಮೇಲೆ ಲೇಖನಿ ಇರಿಸಿದಾಗ ಮರವೊಂದರ ಬುಡಕ್ಕೆ ಕೊಡಲಿ ಇಟ್ಟಂತೆ ಭಾಸವಾಗುತ್ತದೆ ನನಗೆ. ಪ್ರಕೃತಿ ವಿನಾಶಕ್ಕೆ ನಾನು ಕಾರಣ ಎಂಬ ಪಾಪಪ್ರಜ್ನೆ ಕಾಡುತ್ತದೆ. ಅದಕ್ಕೆ ಬುದ್ಧಿ ಬಂದಾಗಿನಿಂದ ನಾನು ತರಗತಿಗಳಲ್ಲಿ ನೋಟ್ಸ್ ಬರೆಯುವುದನ್ನೇ ನಿಲ್ಲಿಸಿಬಿಟ್ಟೆ. ಯಾರೊ ಕ್ಲಾಸಿನಲ್ಲಿ ಗುರುಗಳು ಕೆಮ್ಮಿದ್ದು ಸೀನಿದ್ದನ್ನು ಅಚ್ಚುಕಟ್ಟಾಗಿ ಬರೆದಿರುವ ಪಾಪಿಗಳ ನೋಟ್ಸ್ ತೆಗೆದು ಕೊಂಡು ಮೊಬೈಲ್ ನಲ್ಲಿ ಫೋಟೊ ತೆಗೆದು ಓದುತ್ತೇನೆ. ನನ್ನ ಹಾಗೆ ನೀವು ಪ್ರಕೃತಿ ಪ್ರೇಮಿಗಳಾಗಿ. ಜಗದೀಶ್ ಚಂದ್ರ ಬೋಸರು ಹೇಳಿದ ಹಾಗೆ ಸಸ್ಯಗಳಗೂ ಜೀವ ಇದೆ ಅವುಗಳನ್ನೂ ಬದುಕಲು ಬಿಡಿ.

ಭಾರತ ದೇಶದ ಬೆಳಣಿಗೆಗೆ ಅಡ್ಡಗೋಡೆಯಾಗಿ ನಿಂತಿರವುದು ಸಹ ಈ ಪರೀಕ್ಷೆಗಳೆ. ಪೇಪರ್ ಗಳ ದುರ್ಬಳಕೆ ಜೊತೆ ಭಾರಿ ಸಮಯದ ಪೋಲಾಗುತ್ತಿದೆ. ಮೂವತ್ತು ಕೋಟಿ ವಿಧ್ಯಾರ್ಥಿಗಳು ವರ್ಷಕ್ಕೆ ಸರಾಸರಿ ಆರು ವಿಷಯಗಳಲ್ಲಿ ಹತ್ತು ಪರೀಕ್ಷೆ ಬರದರೆ 30X6X1.5=270 ಕೋಟಿ man hours ಪೋಲು ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಇದರ ಜೊತೆಗೆ ದೊಡ್ಡವರು (ದಡ್ಡರು) ಪ್ರಶ್ನೆ ಪತ್ರಿಕೆ ತಯಾರಿಸುವಲ್ಲಿ, ಮೌಲ್ಯ ಮಾಪನ ಮಾಡುವಲ್ಲಿ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಕಾವಲುಕಾಯುವುದರಲ್ಲಿ ತಮ್ಮಆಮೂಲ್ಯ ಸಮಯವನ್ನು ವ್ಯಯ ಮಾಡುತ್ತಿದ್ದಾರೆ. ಇಷ್ಟು ಸಮಯವನ್ನು ಫಲದಾಯಕ ಕಾರ್ಯಗಳಿಗೆ ಉಪಯೋಗಿಸಿದ್ದರೆ ಇಷ್ಟರಲ್ಲಿ ನಮ್ಮ ದೇಶ ನಂಬರ್ ೧ ದೇಶ ಆಗುತ್ತತ್ತೊ ಏನೊ??

ಈ ಪರೀಕ್ಷೆಗಳಿಂದ ಸಮಾಜಕ್ಕೆ ಎಳ್ಳಷ್ಟಾದರೂ ಉಪಯೋಗವಿದೆಯಾ ನೀವೆ ಹೇಳಿ?? ವಿದ್ಯಾರ್ಥಿಗಳಿಗಂತೂ ಪರೀಕ್ಷೆಯೆಂದರೆ ನರಕವೇ ಸರಿ.ಸರಿಯಾಗಿ ಊಟ ನಿದ್ರೆ ಇಲ್ಲ. ಫ಼ೇಲಾದರೆ ಮಹಾ ಮಂಗಳಾರತಿ. ಪಾಸಾಗಿದ್ದರೆ ಪಕ್ಕದ ಮನೆ ಪದ್ಮಳ ಅಂಕಗಳೊಂದಿಗೆ comparison ಪ್ರತಿಯೊಂದು ಕಡಿಮೆ ಅಂಕಕ್ಕೂ ಬೈಗುಳ. ಅಪ್ಪಿ ತಪ್ಪಿ first rank ಬಂದಿರೆಂದುಕೊಳ್ಳಿ ಆಗಲೂ ಅಷ್ಟೆ "ನೋಡೊ ಇದೊಂದು ಸಾರಿ first rank ಬಂದರೆ ಸಾಲಲ್ಲ ಮುಂದೇನೂ ಹೀಗೆ ಬರಬೇಕು" ಅಂತ ಗಡಸು ಧನಿಯಲ್ಲಿ ನುಡಿಯುವ ಅಪ್ಪಾ. ವಿದ್ಯಾರ್ಥಿಗಳಿಗ ನೆಮ್ಮದಿಯೇ ಇಲ್ಲಾ ಬಿಡಿ. ವಿದ್ಯಾರ್ಥಿಗಳ ಪೋಷಕರಿಗೆ ಬೇಗನ ಕೂದಲು ಬೆಳ್ಳಗಾಗುವಂತೆ ಮಾಡುತ್ತಿರುವುದು ಈ ಪರೀಕ್ಷೆಗಳೆ. ಅಷ್ಟೇ ಅಲ್ಲ ಪೋಷಕರಿಗೆ ರಕ್ತದ ಒತ್ತಡ ಸಕ್ಕರೆ ಕಾಯಿಲೆ ಹಾಗು ಆಗಾಗ್ಗೆ ಹೃದಯಾಘಾತದ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದು ತಮ್ಮ ಮಕ್ಕಳ ಪರೀಕ್ಷೆಗಳೆ. ಇನ್ನೂ ಟೀಚರ್ ಗಳಿಗೆ?? ಅವರಿಗೂ ಪರೀಕ್ಷೆಗಳಿಂದೇನೂ ಲಾಭ ಇಲ್ಲ. ಪ್ರಶ್ನೆ ಪತ್ರಿಕೆ set ಮಾಡ್ಬೇಕು, ಮೌಲ್ಯಮಾಪನ ಮಾಡ್ಬೇಕು. ಈ ಸಮಯನ ಮಕ್ಕಳಿಗೆ ಇನ್ನೊಮ್ಮೆ ಪಾಠ ಅರ್ಥೈಸಿ ಹೇಳಿದ್ದರೆ ಇನ್ನಷ್ಟು ವಿಶ್ವೇಶ್ವರಯ್ಯ, ಸಿ ವಿ ರಾಮನ್ ಹಾಗೆ ಇನ್ನೂ ಅನೇಕ ಬುದ್ದಿವಂತರು ದೇಶಕ್ಕೆ ಸಿಗುತ್ತಿದ್ದರೇನೋ?? ಅದಕ್ಕೆ ಹೇಳೊದು ದೊಡ್ಡವರೆಲ್ಲಾ ಜಾಣರಲ್ಲ (ಹಿನ್ನೆಲೆ ಧ್ವನಿ ನೀವೆ ಸ್ವಲ್ಪ ಗುನುಗಿ) ಚಿಕ್ಕವರೆಲ್ಲಾ ಕೋಣರಲ್ಲಾ.... ಗುರುಗಳು ಹೇಳಿದ ಮಾತುಗಳು ಒಂದು ನಿಜವಲ್ಲ ಗೆಳೆಯಾ ಒಂದು ನಿಜವಲ್ಲಾ.. ಅಂಥಾ.

ಇನ್ನು ಈ ಪರೀಕ್ಷೇಗಳೂ ಯಾವ ಪುರುಷಾರ್ಥಕ್ಕೆ ನೀವೆ ಹೇಳಿ?? ಪರೀಕ್ಷೆಗಳಿಗೆ No ಅನ್ನಿ ಪ್ರಕೃತಿ ಕಾಪಾಡಿ, ದೇಶದ ಏಳ್ಗೆಗೆ ಕೈಜೋಡಿಸಿ :)

Tuesday, March 15, 2011

ಮರೆತು ಮರೆತರು

ನೀನೆ ಬಿಟ್ಟು ಹೋದ ಮೇಲೆ
ನನಗಿಲ್ಲಿನ್ನೇನಿದೆ?
ನೀ ಕೊಟ್ಟು ಹೋದ ಓಲೆ,
ನಿನ್ನ ನೆನಪುಗಳಲ್ಲದೆ?

ನನ್ನ ಕಣ್ಣನು ಕಟ್ಟಿ, ಹಿಡಿದ ಕೈಯನು ಬಿಟ್ಟು,
ಕಾಣದೆ ಎಲ್ಲಿ ಹೋದೆ ನೀ??
ಹೆಣೆದು ಪ್ರೀತಿಯ ಬುಟ್ಟಿ, ಅದರಲಿ ನೋವನು ಇಟ್ಟು
ಹೇಳದೆ ಎಲ್ಲಿ ಹೋದೆ ನೀ??

ಮರೆತು ಮರೆತರು ಏಕೋ ಮತ್ತದೆ ನಿನ್ನಯ ನೆನಪು
ಬೇರೇನೂ ನನಗಿಲ್ಲ ನೀನಲ್ಲದೆ.
ಒಡಲ ಒರತೆಲಿ ಇಂದು ಬಾಡಿದೆ ಎಂದಿನ ಹುರುಪು
ಬರಿದಾಗಿದೆ ಬದುಕು ನೀನಿಲ್ಲದೆ

-ಹೆಸರಲ್ಲೇನಿದೆ

ನೀ ನನ್ನ ಪ್ರೇಮಿಯೊ? ಇಲ್ಲ ಉಗ್ರಗಾಮಿಯೋ??

<ಮೂರು ವರ್ಷಗಳ ಹಿಂದಿನದು>

ನನ್ನ ಹೃದಯದ ತಾಜ್ ಹೋಟೆಲ್ ಗೆ ನೀ ದಾಳಿ ಮಾಡಿದೆ
ನನ್ನ ಮನಸ್ಸಿನ ಶಾಂತಿ ನೆಮ್ಮದಿ ನೀ ಹಾಳು ಮಾಡಿದೆ
ಪ್ರತಿ ಕ್ಷಣದಲೂ ಹೀಗೆ ನನ್ನ ಕೊಲ್ಲುವ
ನೀ ನನ್ನ ಪ್ರೇಮಿಯೊ? ಇಲ್ಲ ಉಗ್ರಗಾಮಿಯೋ??

ನಿನ್ನ ಕಂಗಳೆ ಅಣು ಬಾಂಬ್ ಗಳು
ಕೊಲ್ಲು ನನ್ನನು ಹಾಗೆ ದೃಷ್ಟಿಸಿ
ಸಿಹಿಮುತ್ತಿನ ಗುಂಡು ಮದ್ದಲಿ
ಕೊಲ್ಲು ನನ್ನನು ಒಮ್ಮೆ ಚುಂಬಿಸಿ

ಮೊದಲ ನೋಟದಿ ನಿನ್ನ ಪ್ರೆಮಕೆ ಬಂದಿಯಾದೆನಾ
ಕೊಲ್ಲು ನನ್ನನು ಹಾಗೆ ಬಂದಿಸಿ
ನಿನ್ನ ಬಾಹುಬಂಧನದಿ ಸಿಕ್ಕ ಒತ್ತೆಯಾಳುನಾ
ಕೊಲ್ಲು ನನ್ನನು ಒಮ್ಮೆ ಪ್ರೀತಿಸಿ

-ಹೆಸರಲ್ಲೇನಿದೆ

ನಾ ಪ್ರೀತಿಸುವೆನು ನೀ ಪ್ರೀತಿಸದಿರು

ನಾ ಪ್ರೀತಿಸುವೆನು ನೀ ಪ್ರೀತಿಸದಿರು
ನನ್ ಪ್ರೇಯಸಿಯೆ ನೀ ನನ್ನುಸಿರು
ನಿನ್ನ ನಗುವಲ್ಲಿರೊ ಆ ಹಸಿರು
ಎಂದು ಮಾಸದಿರಲಿ ನೀನೆಲ್ಲಿದರೂ
ಒಂದು ಕ್ಷಣ ನೀನೊಂದರೂ
ಜೋಕೆ ನಿಲ್ಲುವುದು ನನ್ನುಸಿರು

ಗಗನತಾರೆ ನೀ ನಾ ಪ್ರೀತಿಸಿದೆ ನಿನ್ನ
ತಿಳಿ ನೀರಲ್ಲಿದ್ದ ನಿನ್ನ ಸಿಹಿ ಪ್ರತಿಬಿಂಬವನ್ನ
ಮರೆಮಾಡದಿರಲು ನನ್ನಿಂದ ನಿನ್ನ
ಬೆಡುವೆನು ಆ ಮೋಡವನ್ನ
ನೋಡಿ ನಗುವೆಯಾ ಈ ಹುಚ್ಚು ಪ್ರೇಮಿಯನ್ನ
ನಾ ಕೇಳೊದು ಅದೆ ನಿನ್ ಪ್ರೀತಿನಲ್ಲ ಆ ನಿನ್ ನಗುವನ್ನ

-ಹೆಸರಲ್ಲೇನಿದೆ

Tuesday, March 1, 2011

ಹಳೆಯದೊಂದು ಸಂದೇಶ

ಹಾಗೆ ಗಣಕತೆರೆಗೆ ನೇತ್ರಗಳನ್ನು ನೆಟ್ಟು eಲೋಕದಲ್ಲಿ ಅಲೆದಾಡುತ್ತಿದ್ದ ನನ್ನನ್ನು ಭೂಲೋಕಕ್ಕೆ ಕರೆತಂದದ್ದು ನನ್ನ ಸಂಚಾರಿ ದೂರವಾಣಿಯ(ಅದೆ ಮೊಬೈಲ್ ಫೋನು) ಸಣ್ಣ ತೆರೆ ಮೇಲೆ ಮೂಡಿದ "No space for new messages" ಎಂಬ ಸಂದೇಶ. ತಕ್ಶಣವೇ ಮೊಬೈಲ್ ಫೋನನ್ನು ತೆಗೆದುಕೊಂಡು ಹಳೆಯ ಸಂದೇಶಗಳನ್ನ Delete ಮಾಡುವುದರಲ್ಲಿ ನಿರತನಾದೆ. ಅಕಸ್ಮಾತಾಗಿ inbox ನಲ್ಲಿದ್ದ ಕೊನೆಯ ಸಂದೇಶವೊಂದು ತೆರೆಯ ಮೇಲೆ ಮೂಡಿ ಬಂತು. "hi" ಎಂಬ ಎರಡಕ್ಷರದ ಸಂದೇಶವಷ್ಟೆ, ಆದರೂ ಬಹುದಿನಗಳಿಂದ(ವರ್ಷಗಳೇ ಅನ್ನಿ) ಬಲು ಜೋಪಾನಗಾಗಿ ಕಾಪಾಡಿಕೊಂಡು ಬಂದಿದ್ದ ಸಂದೇಶವದು. ಪ್ರೀತಿ (ಹೆಸರು ಬದಲಾಯಿಸಲಾಗಿದೆ) ನನಗೆ ಕಳುಹಿಸಿದ್ದ ಮೊದಲ ಸಂದೇಶವದು, ಹೇಗೆ ತಾನೆ delete ಮಾಡಲು ಸಾಧ್ಯ ನೀವೆ ಹೇಳಿ? ಆ ಎರಡಕ್ಷರಗಳು ನನ್ನ ಕಣ್ಮುಂದೆ ಎರಡು ವರ್ಷಗಳನ್ನ ಹಾಗೆ ಮಂದಬೆಳಕಿನಲ್ಲಿ ನೆನಪಿನ ಪರದೆಯ ಮೇಲೆ ತಂದಿಟ್ಟವು.

ಇಂಜಿನಿಯರಿಂಗ್ ನ ಐದನೇ ಸೆಮೆಸ್ಟರ್ ನಲ್ಲಿದ್ದೆ ನಾನಾಗ. ಮಳೆಗಾಲದ ಸಂಜೆ(ಮಂಗಳೂರಿನಲ್ಲಿ ಮಳೆಗಾಲವೆಂದರೆ ನಿಜವಾಗಿಯೂ ಮಳೆಗಾಲವೆ, ಬೇರೆ ಕಡೆಯ ಹಾಗೆ ಹೆಸರಿಗೆ ಮಾತ್ರ ಮಳೆಗಾಲವಲ್ಲ) ಹಾಗೆ ಕ್ಯಾಂಪಸ್ ನಲ್ಲಿ ಗೆಳೆಯನೊಡನೆ ಅಡ್ಡಾಡುತ್ತಿದ್ದೆ. ಇದ್ದಕ್ಕಿದ್ದಂತೆ ಮಳೆ ಶುರುವಾಯಿತು, ಮಳೆಯಿಂದ ರಕ್ಷಣೆಪಡೆಯಲು ಗ್ರಂಥಾಲಲವನ್ನು ಸೇರಿದೆವು. ಲೈಬ್ರರಿಗೆ ಎಂಟ್ರಿಕೊಟ್ಟು ಬಹಳ ದಿನಗಳೆ ಆಗಿದ್ದವು. ಪರೀಕ್ಷೆಯ ಹಿಂದಿನಗಳಲ್ಲಿ ಪುಸ್ತಕಗಳ ನಕಲುಪ್ರತಿ (photocopy) ಪಡೆಯಲು ಅಥವಾ ಎರಡು ತಿಂಗಳಿಗೊಮ್ಮೆ ಎರವಲು ಪಡೆದಿದ್ದ ಪುಸ್ತಕಗಳ ಸ್ವಾಮ್ಯತ್ವ ನವೀಕರಿಸಲು ಮಾತ್ರ ಗ್ರಂಥಾಲಯಕ್ಕೆ ಬರುವ ನಿಯಮ ನನ್ನದಾಗಿತ್ತು. ಜೊತೆಗಿದ್ದ ಗೆಳೆಯನ ಒತ್ತಾಯದ ಮೇರೆಗೆ ಲೈಬ್ರರಿಯ ಒಳಗೆ ಪ್ರವೇಶಿಸಿದೆ. ಪ್ರಾಣಿ ಪ್ರಿಯ ಸ್ನೇಹಿತ,National Geographic ನಿಯತಕಾಲಿಕೆಯೊಳಗೆ ಮುಳುಗಿದ. ಉದ್ದೇಶವಿಲ್ಲದೆ ಲೈಬ್ರರಿಗೆ ಬರುವುದರಲ್ಲಿ ಎನೋ ಮುಜುಗರ, ಅದರಲ್ಲೂ ಅಲ್ಲೇ ಕುಳಿತು ಪುಸ್ತಕ ಓದುವುದೆಂದರ ನನ್ನ ಪ್ರತಿಷ್ಠೆಗೆ ಧಕ್ಕೆ ಬರುವ ಕಲಸವೆಂದೆ ಭಾವಿಸದ್ದೆ. ಗೆಳೆಯ ಒತ್ತಾಯ ಮಾಡಿದ್ದರಿಂದ ಕೈಯಲ್ಲಿ ಪುಸ್ತಕಹಿಡಿದು ಕೂತೆ. ಕೈಯಲ್ಲಿ ಪುಸ್ತಕವಿದ್ದರೂ, ಕಣ್ಣುಗಳು ಮಾತ್ರ ಲೈಬ್ರರಿಯ ಗೋಡೆ, ಕುರ್ಚಿ ಮೇಜು, ಪುಸ್ತಕದೊಳಗೆ ಮುಳುಗಿದ್ದ ಪುಸ್ತಕದಹುಳಗಳು ಹೀಗೆ ಹತ್ತು ಹಲವಾರು ಕಡೆ ಹರಿಯುತಿತ್ತು. ಅಷ್ಟರಲ್ಲಿ ಅಕಸ್ಮಾತಾಗಿ ಲೈಬ್ರರಿಯ ಪೂರ್ಣ ಪ್ರಮಾಣದ ಉಪಯೋಗ ಪಡೆದು ಮೂರು ಹೊತ್ತಿಗೆಗಳನ್ನು ಹಿಡಿದು ಹೊರನಡೆಯುತ್ತಿದ್ದ ಪ್ರೀತಿಯು ನನ್ನ ದೃಷ್ಟಿಯನ್ನು ಸೆಳೆದಳು. ಅದೆ ಹೊತ್ತಿಗೆ ನನ್ನ ಸ್ನೇಹಿತನೂ ಕೂಡ ಆ National Geographic ನಿಯತಕಾಲಿಕೆಯನ್ನು ಮೇಲಿಂದ ಕೆಳಗೆ ಮೇಯ್ದು ಮುಗಿಸಿ "ಹೊರಡುವಾ??" ಎಂದ. ಇಬ್ಬರೂ ಲೈಬ್ರರಿಯಿಂದ ಹೊರನಡೆದೆವು. ಅಷ್ಟರಲ್ಲಿ ಕೊಡೆಹಿಡಿದು ತುಂತುರು ಮಳೆಯಲ್ಲಿ ತನ್ನ ಹಾಸ್ಟೆಲ್ ನತ್ತ ಹೆಜ್ಜೆ ಇಟ್ಟಿದ್ದಳು ಪ್ರೀತಿ. ಅವಳ ಮುಖವನ್ನು ಮರೆಮಾಡಿದ್ದ ಕೊಡೆಯನ್ನು ಮನಸ್ಸಿನಲ್ಲೇ ಶಪಿಸುತ್ತಾ ನಾನು ಹಾಸ್ಟೆಲ್ ನೆಡೆಗೆ ಹೊರಟಿದ್ದೆ. ಮಳೆಗೂ ಪ್ರೀತಿಗೂ ಎಲ್ಲಿಯ ನಂಟೊ?? ಫ್ರಿತಿ ಪ್ರೇಮ ಕೇವಲ ಕಥೆ ಕಾದಂಬರಿ ಚಲನಚಿತ್ರಗಳಲ್ಲಿ ಮಾತ್ರ ಎಂದು ಧ್ರುಡವಾಗಿ ನಂಬಿದ್ದ ನನಗಂದು ನನ್ನ ನಂಬಿಕೆ ಸುಳ್ಳೆಂದೆನಿಸತೊಡಗಿತು.

ತುಂಬಾ ಪ್ರೀತಿಸುವ ಅಪ್ಪ ಅಮ್ಮ, ಸದಾ ನಕ್ಕು ನಗಿಸುತ್ತಿದ್ದ ಗೆಳೆಯರು, ಭವಿಷ್ಯದ ಭರವಸೆ ನೀಡಿದ್ದ ಕಾಲೇಜು, ಹಾಜರಾತಿ(attendance) ನಿರ್ಬಂಧವೊಡ್ಡದ ಉಪನ್ಯಾಸಕರು, ಹರ್ಷತುಂಬಿದ ಹಾಸ್ಟೆಲ್ಲು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು ನನ್ನ ಜೀವನ. ನನ್ನ ಜೀವನದಲ್ಲಿ ಏನೋ ಕಮ್ಮಿಯಾಗಿದೆ ಎಂದೆನಿಸತೊಡಗಿದ್ದು ಆಗಲೆ. ನನಗೂ ಕೂಡ ಗೆಳತಿಯೊಬ್ಬಳು ಬೇಕೆಂದೆನಿಸತೊಡಗಿತ್ತು. ಪ್ರೀತಿಯೇ ಆ ಗೆಳತಿಯಾಗಿ ಬರಲಿ ಎಂದು ಮನಸ್ಸು ಕೇಳಿಕೊಳ್ಳಲಾರಂಭಿಸಿತು. ಲೈಬ್ರರಿಯ ನಂತರ ಪ್ರೀತಿ ಮತ್ತೆ ಕಾಣಿಸಿಕೊಂಡಿದ್ದು ಪ್ರಥಮ ವರ್ಷದವರಿಗೆಂದೆ ಏರ್ಪಡಿಸಿದ್ದ ಸ್ಪರ್ಧೆಯೊಂದರಲ್ಲಿ. ಆಗಲೆ ಅವಳ ಹೆಸರು ನನಗೆ ತಿಳಿದಿದ್ದು, ನನ್ನ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದ ಅವಳ ಬಿಂಬಕ್ಕೆ ಅಂದೆ ಮರುನಾಮಕರಣವಾಯಿತು. ಅಲ್ಲಿತನಕ ಕಾಡುತಿದ್ದ ಆಕೆಯ ರೂಪದೊಂದಿಗೆ ಅವಳ ಹೆಸರು ಕೂಡ ಜೊತೆಯಾಯ್ತು. ಮೊದಲ ನೋಟದಲ್ಲೇ ಅಕೆಯೆಡೆಗೆ ಆಕರ್ಷಿತನಾಗಿದ್ದರಿಂದಲೋ ಏನೋ ಆಕೆಯ ಎಲ್ಲಾ ಚಲನವಲನಗಳಲ್ಲಿ ವಿಶೇಷತೆ ಕಾಣತೊಡಗಿದೆ. ಪ್ರೀತಿಯನ್ನು ಪ್ರೀತಿಸಬೇಕೆಂಬ ಹಂಬಲ ಹೆಚ್ಚಾಯ್ತು. ಕಾಲ ಕ್ರಮೇಣ ನನ್ನ ಪ್ರೀತಿಗೆ ಪ್ರತಿಸ್ಪರ್ಧಿಗಳೂ ಹುಟ್ಟಿಕೊಂಡರು.

ಪಠ್ಯೇತರ ಚಟುವಟಿಕೆಗಳಲ್ಲಿ ಸ್ವಲ್ಪ ಹೆಚ್ಚು ಆಸಕ್ತಿ ಇದ್ದರಿಂದ ಕಾಲೇಜಿನ ಒಂದೆರೆಡು ಸಂಘ ಸಮಿತಿಗಳಲ್ಲಿ ಸದಸ್ಯತ್ವ ದೊರಕಿತ್ತು. ಈ ಸಂಘ ಸಮಿತಿಗಳೇ ಮತ್ತೆ ನಮ್ಮಿಬ್ಬರ ಭೇಟಿ ಮಾಡಿಸಿದ್ದು. ಹುಡುಗಿ ಕನ್ನಡದವಳೇ ಎಂದು ತಿಳಿದು ಖುಷಿಯಾಯ್ತು. ಇದಕ್ಕೂ ಮುಂಚೆ ಅಪ್ರಯೋಜನಕಾರಿ ಎಂದಿನಿಸುತ್ತಿದ್ದ ಈ ಸಂಘ ಸಮಿತಿಗಳು ಇದ್ದಕ್ಕಿದ್ದಂತೆ ಬಹು ಮುಖ್ಯವೆಂದೆನಿಸತೊಡಗಿದವು. ಸ್ವಲ್ಪ ಹೆಚ್ಚು ಆಸಕ್ತಿಯಿಂದಲೆ ಅದೊಂದು ದಿನ ಹತ್ತು ನಿಮಿಷಗಳ ಮುಂಚೆಯೆ ಮೀಟಿಂಗಿಗೆ ನಿರ್ಧರಿಸಲಾಗಿದ್ದ ಸ್ಥಳ ತಲುಪಿದೆ. ಆಕೆಯು ಮೊದಲನೆ ವರ್ಷದಲ್ಲಿದ್ದರಿಂದ ನಿರ್ಧರಿಸಿದ್ದ ಸಮಯಕ್ಕೆ ಮುಂಚಯೆ ಬಂದಿದ್ದಳು.ಸೀನಿಯರ್ ಆದ ನನಗೆ ನಮಸ್ಕರಿಸಲೆಂದು ಮುದ್ದಾದ ನಗು ಬೀರಿದಳು. ಆಕೆ ನಕ್ಕಾಗ ಅವಳ ತುಟಿಗಳ ಮಧ್ಯೆ ಮೂಡಿದ ಬಿದಿಗೆ ಚಂದಿರ ಎದಯೊಳಗೆ ಬೆಳದಿಂಗಳನ್ನೆ ಚೆಲ್ಲಿದ್ದ. ಸಹಜವಾಗಿ ಯಾರೆ ಇದ್ದರು ನಗುವಿನ ಮೂಲಕ ಶುಭಾಶಯ ತಿಳಿಸುವುದು ನಮ್ಮ ಸಂಸ್ಕೃತಿಯೆಂದು ತಿಳಿದಿದ್ದರು, ಆ ನಗುವನ್ನು ಪ್ರೀತಿಯ ಸಂಕೇತವೆಂದೆ ಅರ್ಥೈಸಿಕೊಳ್ಳಲು ಶುರುಮಾಡಿತ್ತು ಹುಚ್ಚು ಮನಸ್ಸು. ಹಾಗೆ ನಮ್ಮಿಬ್ಬರ ಪರಿಚಯ ಕೂಡ ಆಯ್ತು, ದೂರವಾಣಿ ಸಂಖ್ಯೆಯನ್ನು ಕೂಡ ಪಡೆದೆ, ಕೇವಲ ಮೊಬೈಲ್ ಸ್ಮರಣೆಯಲ್ಲಿ (memory) ಮಾತ್ರವಲ್ಲ ಮಸ್ತಕದಲ್ಲೂ ಅಚ್ಚಾಯಿತು. ಒಂದೆರೆಡು ವಾರಗಳಲ್ಲಿ ಪರಿಚಯ ಸ್ನೇಹವಾಗಿ ಪರಿವರ್ತನೆಯಾಯಿತು.

ಅಷ್ಟರಲ್ಲಿ ಐದನೇ ಸೆಮೆಸ್ಟರ್ ಮುಗಿದು ಒಂದು ತಿಂಗಳ ರಜೆ ಘೋಷಿಸಲಾಗಿತ್ತು. ಆಗಾಗ ಪ್ರೀತಿ ತುಂಬಿದ ಸಂದೇಶಗಳನ್ನು ಅಕ್ಷರೀಕರಿಸಿ ಸಂಚಾರಿ ದೂರವಾಣಿಯ ಮೂಲಕ ವಿದ್ಯುತ್ ಕಾಂತೀಯ ಅಲೆಗಳೆಗಾಗಿಸಿ ದೂರದ ಪ್ರೀತಿಯ ಊರಿಗೆ ತೇಲಿಬಿಡುತ್ತಿದ್ದೆ. ಅವಳು ಕೂಡ ಆ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿದ್ದಳು. ನನ್ನನ್ನು ಫ಼ೇಸ್ ಬುಕ್ ಲೋಕಕ್ಕೆ ಪರಿಚಯಿಸದವಳು ಅವಳೇ. ಆರ್ಕುಟ್ ನ ಸಹವಾಸದಿಂದಾಗಿ ಪರೀಕ್ಷೆಗಳಲ್ಲಿ ದೂರವಾಣಿ ಸಂಖ್ಯೆಗಳಂತೆ ಅಂಕಗಳಿಸಿ ಈ social networking ತಾಣಗಳಿಗೆ ನಮಸ್ಕಾರ ಹೇಳಿದ್ದೆ, ಪ್ರೀತಿಯ ಕೋರಿಕೆ ಯಾಗಿದ್ದರಿಂದ ಇಲ್ಲ ಎನ್ನಲಾಗದೆ e ಪ್ರೇಮದ ಆಹ್ವಾನವಿದೆಂದು ಖುಷಿಯಾಗಿ ಫ಼ೇಸ್ ಬುಕ್ ಸೇರಿದೆ. ರಜೆ ಮುಗಿದು ಪುನಃ ಕಾಲೇಜಿಗೆ ಮರಳಿದೆ.

ಗೆಳೆಯರೊಡನೆ ಹೊಸ ವರ್ಷ ಆಚರಿಸುತ್ತಾ ಪ್ರೀತಿಯ ಮೇಲಿನ ಪ್ರೀತಿಯ ಬಗ್ಗೆ ಹೇಳಿಕೊಂಡೆ. ಆ ವಾರ್ಷಿಕ ಯೋಜನೆಲ್ಲಿ ಪ್ರೀತಿಯೊಂದೆ ಪ್ರಮುಖವೆನಿಸಿತ್ತು. ಹಾಸ್ಟೆಲಿನ ಲವ್ ಗುರುಗಳೆಲ್ಲಾ ಸಲಹೆ ನೀಡಲಾರಂಬಿಸಿದರು. ಸಮಸ್ತ ಗೆಳೆಯರ ಬಳಗೆವೇ ನನ್ನನ್ನು ಹುರಿದುಂಭಿಸಿ ನನ್ನ ಪ್ರೀತಿಗೆ ಸಹಾಯಮಾಡಲು ತೀರ್ಮಾನಿಸಿದರು. ಒಬ್ಬ ಹುಡುಗ ಹಾಳಾಗುವದರಲ್ಲಿ ಗೆಳೆಯರ ಪಾಲುದರಿಕೆ ಇದ್ದೆ ಇರುತ್ತದೆಯಲ್ಲವೆ. ನನ್ನ ಹೆಸರ ಮರೆತು ಆಕೆಯ ಹೆಸರಿಂದಲೇ ನನ್ನನ್ನು ಕರೆಯಲಾರಂಭಿಸಿದರು. ಗೆಳೆಯರು ನೀಡಿದ ಉತ್ತೇಜನದಿಂದ, ನನಗೆ ನಾನೊಬ್ಬ ಅಮರ ಪ್ರೇಮಿ ಎಂದಿನಿಸತೊಡಗಿತು. ಫ಼ೇಸ್ ಬುಕ್ಕನ್ನು ಹೊಕ್ಕಿ, ಆಕೆಯ ಛಾಯಾಚಿತ್ರಗಳನ್ನು ಹೆಕ್ಕಿ ತಂದೆ, ಆ ಚಿತ್ರಗಳು ನನ್ನ ಗಣಕ ತೆರೆಯನ್ನು ಅಲಂಕರಿಸಿದವು. ಕಾಲೇಜಿನ ನಿಯತಕಾಲಿಕೆಗಳಿಗೆ ನಾ ಬರೆದ ಎಲ್ಲಾ ಕವನಗಳಿಗೆ ಸ್ಪೂರ್ತಿಯಾದಳು ಪ್ರೀತಿ. ನನ್ನ 1/3 ಜೀವನದ ಸಂಗಾತಿಯಾದಳು ಪ್ರೀತಿ (ಸಾಕ್ಷಿ ಕೇಳುವವರಿಗೆ : ಒಂದು ದಿನಕ್ಕೆ ಇಪ್ಪತ್ತ್ನಾಲ್ಕು ತಾಸುಗಳಿದ್ದು ಅದರಲ್ಲಿ ನಾ ನಿದ್ರಿಸುವ ಎಂಟೂ ತಾಸುಗಳು ಅವಳದೆ ಕನಸು. ಹೀಗಿರುವಾಗ ಆಕೆ ನನ್ನ 1/3 ಜೀವನದ ಸಂಗಾತಿಯಲ್ಲವ?).

ಕೊನೆಗೂ ಪ್ರೇಮಿಗಳ ದಿನ ಬಂತು. ನನ್ನ ಎದೆಯಾಳದಲ್ಲಿ ಬಹುದಿನಗಳಿಂದ ಜೋಪಾನವಾಗಿ ಬಚ್ಚಿಟ್ಟಿದ್ದ ಮಾತುಗಳೆಲ್ಲವನ್ನು ಆಕೆಗೆ ಹೇಳಬೇಕೆಂದುಕೊಂಡೆ. ದಿನವಿಡಿ ಅರ್ಥವಿಲ್ಲದೆ ಮಾತನಾಡಬಲ್ಲವನಾಗಿದ್ದ ನನಗೆ ನನ್ನ ಪ್ರೀತಿಯನ್ನುಆರ್ಥೈಸಿ ಹೇಳಲು ಧೈರ್ಯ ಸಾಲಲಿಲ್ಲ. ಪ್ರೀತಿ ತನ್ನ ಪ್ರೀತಿಸುವ ಪ್ರೀತಿನ್ನು ಕಂಡುಕೊಂಡಳು. ಕನಸ್ಸಿನಲ್ಲಿ ನನ್ನ ಜೀವನವೇ ಆಗಿದ್ದ ಪ್ರೀತಿ ನಿಜಜೀವನದಲ್ಲಿ ಕನಸಾಗೇ ಉಳಿದಳು. ಆಕೆಗೆ ನಾ ಅವಳನ್ನು ಪ್ರೀತಿಸಿದ ವಿಷಯವೇ ತಿಳಿಯಲಿಲ್ಲ. ಅವಳು ಎಂದಿನ ಹಾಗೆಯ ನನ್ನಡೊನೆ ಮಾತಾಡುವುದನ್ನು ಮುಂದುವರಿಸಿದಳು. ಆಗ ನನಗೆ ತಿಳಿಯಿತು ಮೊದಲು ಕೂಡ ಅವಳು ಇಷ್ಟೇ ಸಹಜವಾಗಿ ಮಾತನಾಡುತ್ತಿದ್ದಳು ಅದನ್ನೆಲ್ಲಾ ಪ್ರೀತಿಯೆಂದು ನಾನೆಂದುಕೊಂಡಿದ್ದೆ ಎಂದು. ನನ್ನ ಈ ಕಥೆಗೆ ಗೆಳೆಯರೆಲ್ಲಾ ಕಡಲ ಕಿನಾರೆಯ ಕಾಲೇಜಿನ ಕಣ್ಣೀರ ಕಹಾನಿ ಎಂದು ಹೆಸರಿಟ್ಟರು :)

ಇಂಜಿಯನಿರಿಂಗ್ ನ ಕೊನೆವಯ ವರ್ಷ ಹಾಗೆ ಗೆಳೆಯರೊಡನೆ ಕಳೆದೆ :) ಆಗಾಗ ಕ್ಯಾಂಪಸ್ ನಲ್ಲಿ ಪ್ರೀತಿಯನ್ನು ಅವಳ ಪ್ರೀತಿಯೊಡನೆ ಕಂಡಾಗ ಖುಷಿಯಾಗುತಿತ್ತು. ನನ್ನ ಪ್ರೀತಿ ಅವಳಾಗಲಿಲ್ಲವಲ್ಲ ಎಂದು ಬೇಸರವು ಆಗುತಿತ್ತು. ಇಂಜಿನಿಯರಿಂಗ್ ಮುಗಿದು ನಮ್ಮಿಬ್ಬರ ಜೀವನ ಹಾದಿಗಳು ಕವಲೊಡಯಿತು. ಜೊತೆಗೆ ನೆಡೆದ ಕೆಲದಿನದ ಹೆಜ್ಜೆಗುರುತಗಳು ಮಾತ್ರ ನೆನಪಾಗಿ ಉಳಿದಿವೆ. ಆ ನೆನಪುಗಳಲ್ಲಿ ಈ sms ಕೂಡ ಒಂದು :)